ದುರಾಸೆಯ ದುರದೃಷ್ಟ
(ಕರ್ಮವೀರ ವಾರ ಪತ್ರಿಕೆಯಲ್ಲಿ ಪ್ರಕಟಿತ )
ಭುವಿಯ ಒಡಲೊಳಗೆ ಅಪರಿಮಿತ ದಾಹ,
ಒಂದು ಹನಿ ನೀರಿಲ್ಲ ತಂಪಾಗಲು,
ಇದ್ದ ಬದ್ದುದನೆಲ್ಲ ಬಾಚಿ ಬರಗಿ ಕುಡಿದು
ತಾ ಗೆದ್ದೆ ಎಂದು ಬೀಗಿದ ಮನುಜ
ಗೆದ್ದಿದ್ದಾನೆಯೇ ಭೂತಾಯಿ ಪ್ರೀತಿಯಲ್ಲಿ?
ಮೋಡಕಟ್ಟಿ ಮಳೆ ಪ್ರೇಮದಿಂದ ಭುವಿಯೊಡಲ
ಸೇರಲು ಹಂಬಲಿಸಿ ನೆಲದತ್ತ ದಾವಿಸಿದರೆ,
ಒಂದಿನಿತೂ ಜಾಗವಿಲ್ಲದೇ ನೆಲಕ್ಕೆಲ್ಲ
ಸಿಮೆಂಟು-ಡಾಂಬಾರು ಹಾಕಿ,
ಶ್ರೀಮಂತನಾದೆನೆಂದು ಕೊಬ್ಬಿಹನಲ್ಲ ಮನುಜ
ಭೂತಾಯಿ ಎದುರಲ್ಲಿ ಅದೆಷ್ಟು ಶ್ರೀಮಂತ ಆತ?
ಮಂಚದ ಮೋಹಕ್ಕೆ ಮರಗಳಿಗೆ ಕೊಡಲಿ ಹಾಕಿ
ಲಾಲಸೆಯ ಆಸೆಯಲಿ, ಖಾರ್ಖನೆಗಳಲ್ಲಿ ಹೊಗೆ ಸುರಿಸಿ.
ಬೆಳಕಿಗೇ ಬೆಂಕಿ ಹಚ್ಚಿ, ಸೂರ್ಯನನೇ ಸುಡಲು
ಅವಿರತವಗಿ ಹೊಂಚು ಹಾಕಿಹನಲ್ಲ ಮನುಜ.
ಮುಂದೆ ಬದುಕುವನೇ ಆತ ಭೂತಾಯಿ ಮಡಿಲಲ್ಲಿ?
ಆಧುನಿಕತೆಯ ಆಡಂಬರದ ಕೈಬಳೆ ತೊಟ್ಟು
ಹೆತ್ತ ತಾಯಿಯ ಮಡಿಲಿಗೆ ಬೆಂಕಿ ಹಚ್ಚಿ
ತಾನು ಕೆಚ್ಚೆದೆಯವನು ಎಂದು, ಕಚ್ಚೆ ಹರುಕನಂತೆ ಕಿರುಚಿ
ಡಾಂಭಿಕ ಡೋಂಗಿತನಕ್ಕೆ ವ್ಯಾಪರವೆಂದು ಹೆಸರಿಟ್ಟು
ತಾನು ಮಾತ್ರ ಸಂಪನ್ನನಂತೆ ಬದುಕುವ
ಹುನ್ನಾರದಲ್ಲಿರುವವನಲ್ಲ ಮನುಜ,
ಭೂತಾಯಿಯ ಮೃದುತ್ವ ತಿಳಿಯುವುದೇ ಅವನಿಗೆ.
ನಗರದ ಮೂಲೆ ಮೂಲೆಗಳಲ್ಲಿ
ಕೋಟ್ಯಾಂತರ ಜನ ಉಸಿರಾಡುತ್ತದ್ದಾರೆ,
ಅದರಲ್ಲಿ ಬದುಕಿರುವವರೆಷ್ಟು ಜನ?
ಉತ್ತರಿಸಬಲ್ಲನೇ ಮನುಜ?
-ನವೀನ್ ಕುಮಾರ್ ಜಿ ಕೆ

ಕರ್ಮವೀರ ವಾರ ಪತ್ರಿಕೆಯಲ್ಲಿ ಪ್ರಕಟಿತ
Congratulations my brother.👌 ಆದರೆ ಕೆಲವು ತಪ್ಪುಗಳಿವೆ ಗುರುತಿಸಿ ಸರಿಪಡಿಸು.
LikeLiked by 1 person
ಖಂಡಿತಾ ಅಕ್ಕ
LikeLiked by 1 person