ಧನ್ಯವಾದಗಳು ಹಸಿರು ಕುಡಿಯೇ
ಕಬ್ಬನ್ನೆಲ್ಲ ಕಡಿದು-ಸುಲಿದು ಬೆಂಕಿ ಇತ್ತ
ಕಬ್ಬಿನ ಗದ್ದೆಯಲ್ಲಿ ಅಪ್ಪನ ಜೊತೆ
ಸುಮ್ಮನೆ ಕಸ ತೆಗೆಯುತ್ತಿದ್ದೆ.
ಮಳೆ ಇಲ್ಲದೆ, ರಸ ಸತ್ತ ಕಬ್ಬುಗಳ ನೆನೆದು
ಅಪ್ಪ ಸಪ್ಪೆಯಾಗಿದ್ದರು,,,
ಸಾಲದ ಹೊರೆ ತಲೆಯ ಮೇಲೆ ಕುಣಿಯುತ್ತಿತ್ತು.
ಅಲ್ಲೇ
ಬೆಂಕಿಯಿಂದಾ ಸುಟ್ಟ ಕಪ್ಪು ಭೂದಿಯ ಮಧ್ಯ
ಮೊದಲ ಮಳೆಗೆ “ಹಸಿರು ಕುಡಿಯೊಂದು” ಎದ್ದು ಬಂದಿತ್ತು.
ಇಷ್ಟು ಬೆಂಕಿಯ ಮಧ್ಯ, ಕೆಚ್ಚೆದೆಯಿಂದಾ ಉಳಿದ ಈ ಕುಡಿಯ ಭ್ರೂಣದ ಛಲ ಎಂತಹದ್ದು ?
ಎದೆಗೆ ಬಿದ್ದ ನೋವುಗಳನ್ನೆಲ್ಲ
ಗಂಟು ಕಟ್ಟಿ ಮೂಲೆಗೆಸೆದು
ಎದ್ದು ಬಾ ಎಂದು,,,,
ಮೌನವಾಗಿಯೇ ದೊಡ್ಡ ಪಾಠ ಕಲಿಸಿತು ಆ ಹಸಿರು ಕುಡಿ.
*************************************************************
ಸಾಲದ ಹೊರೆ ಹೊತ್ತು,
ಭೂಮಿ-ಮಳೆಯ ಚೆಲ್ಲಾಟಕ್ಕೆ ಬೇಸತ್ತ ರೈತ ನನ್ನ ಅಪ್ಪ,,,
ರಾಜಕರಣಿಗಳ ಬೇವರ್ಸಿ ಬುದ್ದಿಗೆ ಮನನೊಂದ ರೈತ ನನ್ನ ಅಪ್ಪ,,,,
ಆತ ಸಾಯುವ ನಿರ್ಧಾರ ಮಾಡಿದ್ದು ನನಗೇ ಯಾವತ್ತೋ ಗೊತ್ತಿತ್ತು
************************************************************
ಅಪ್ಪನನ್ನು ಕರೆದು ಹಸಿರು ಕುಡಿ ತೋರಿಸಿದೆ,,,,
ನಿಧಾನವಾಗಿ ಅದನ್ನು ಕೈಯಲ್ಲಿ ಸವರಿದ
ತಲೆ ಎತ್ತಿ ಆಕಾಶ ನೋಡಿದ,,,,,
ಹೆಗಲಿಗೆ ರುಮಾಲು ಹಾಕಿ ಸೀದ ಮನೆಗೆ ಹೋಗಿಯೇ ಬಿಟ್ಟ,,,
************************************************************
ಅವ್ವ ಹೇಳುತ್ತಿದ್ದಳು.
ನಿನ್ನಪ್ಪ ಮೊದಲ ಬಾರಿ ನಕ್ಕ ಎಷ್ಟೋ ವರ್ಷಗಳ ನಂತರ, ಎಂದು,
ಅಡಿಕೆಗೆ ಹುಳಕ್ಕೆ ಹೊಡೆಯುವ ವಿಷದ ಬಾಟಲಿ,
ಅಪ್ಪನ ಊಟದ ಕೈಚೀಲದಿಂದ ಮಾಯವಾಗಿ ಅಟ್ಟ ಸೇರಿತು,
ಓ ಹಸಿರು ಕುಡಿಯೇ,,,,,
ನನ್ನಪ್ಪನ್ನನ್ನು ನನಗೆ ಉಳಿಸಿ ಕೊಟ್ಟೆ,,,,,
ನೀ ಸದಾ ನಗುತ್ತಿರು.
ಧನ್ಯವಾದಗಳು ನಿನಗೆ
-ಜಿ ಕೆ ನ