Skip to content

ಅನುವಾದಿಸಬೇಕಿದೆ ಅವನ ಬದುಕನ್ನು

ಜುಲೈ 27, 2016

ಅವನು ಬಂದು ನನ್ನಲ್ಲಿ ಕೇಳಿದ, “ನನ್ನ ಬದುಕನ್ನು ಅನುವಾದ ಮಾಡಿ ಕೊಡು ಎಂದು”,
ಏನು? ಅನುವಾದವೇ?
ಹೌದು!
ಬಣ್ಣ ಬಣ್ಣದ ಕನಸು ಕಂಡ ಅವನ ಎದೆಗೆ ಕಪ್ಪು ಬಣ್ಣ ಶಾಶ್ವತ ಎನಿಸುವ ಭಾವ ಬಂದಾಗ, ಅವನಿಗೆ ಬದುಕಿನ ಅನುವಾದದ ಅವಶ್ಯಕತೆ ಕಂಡಿರಬೇಕು, ಮರಳು ತೆಗೆದು ಉಳಿದ ನದಿಯ ಆಳದೊಳಗೆ ಮೀನೊಂದು ಹಾಯಾಗಿ ನಿದ್ರಿಸಿದಂತೆ ನಿದ್ರಿಸಬೇಕಂತೆ ಅವನಿಗೆ, ಅದೆಷ್ಟು ದಿನಗಳಾದವೋ ನಿದ್ರೆ ಇಲ್ಲದೆ, ಒಂದಷ್ಟು ದಿನ ಅವಳ ಮಡಿಲಿಗೂ ಹಂಬಲಿಸಿದ, ಅವಳಾದರೋ ಮಹಾ ಮಾಯಾವಿ, ಕೈ ಸವರಿ ಓಡಿ ಹೋದಳು, ಹಾಗೆಂದು ಒಂಟಿತನವಲ್ಲ, ಅವನಗೇನೊ ನಶೆ, ಬದುಕಿನ ನಶೆ,

ತನ್ನವರು ಎಂಬ ವ್ಯಕ್ತಿಗಳನ್ನು ಕಳೆದುಕೊಂಡು, ಮತ್ತೆ ಮತ್ತೆ ಬದುಕಬೇಕೆಂಬ ಪಣತೊಟ್ಟಂತೆ ಬದುಕಲು ಹವಣಿಸಿದ್ದಾನೆ, ಸಾವಿನ ಕೆನ್ನಾಲಿಗೆ ಆಪ್ತರನ್ನು ಕಣ್ಣೆದುರಲ್ಲಿ ಕಿತ್ತು ಇವನಿಗೆ ಕಣ್ಣು ಹೊಡೆದು ಹೋದಾಗ, ಒಬ್ಬನೇ ಕುಳಿತು ಗಂಟೆಗಟ್ಟಲೆ ಅತ್ತಿದ್ದಾನೆ, ನೇಸರನಿಗೆ “ನೀನು ಹುಟ್ಟಲೇ ಬೇಡ” ಎಂದು ಶಾಪ ಹಾಕಿದ್ದಾನೆ, ಕಾಲ ಚಕ್ರಕ್ಕೆ ತಲೆ ಕೊಟ್ಟು ಮತ್ತೆ ಬದುಕಲು ನಿಲ್ಲುತ್ತಾನೆ, ಚಿತ್ರ ವಿಚಿತ್ರ ಸನ್ನಿವೇಶಗಳಲ್ಲಿ, ಚಿತ್ರ ವಿಚಿತ್ರವಾಗಿ ಆಡುತ್ತಾನೆ, ಸ್ವಲ್ಪ ಹೊತ್ತಿನಲ್ಲಿ ಮತ್ತಷ್ಟು ಗಂಭೀರವಾಗಿ ಏರು ಧ್ವನಿಯಲ್ಲಿ ಹಾಡುತ್ತ ಹತ್ತಿರದ ನಲ್ಲಿಯಲ್ಲಿ ತಲೆ ತೊಳೆದುಕೊಳ್ಳುತ್ತಾನೆ, ನಗರದ ನರಕಕ್ಕೆ ನಗುತ್ತಾನೆ, ಕಾಡುಮೇಡುಗಳ ಮಧ್ಯ ಲೀನವಾಗುತ್ತಾನೆ. ಅಲ್ಲಿ ಧ್ಯಾನಸ್ಥನಾದವನು ಎರಡು ದಿನಗಳ ಕಾಲ ಅದರ ನಶೆಯಲ್ಲಿ ಬದುಕುತ್ತಾನೆ, ಒಂದೊಮ್ಮೆ ನಗರದಲ್ಲಿ ಮೊಲೆ ತೋರಿಸುವ ಹೆಣ್ಣುಗಳಿಗೆ ಮಾರು ಹೋಗುತ್ತಾನೆ, ಅವರ ಮಡಿಲಲ್ಲಿ ತಾಯಿ ಇದ್ದಾಳೋ ಎಂದು ಹುಡುಕುತಾ ತನಗೆ ತಾನೇ ನಕ್ಕು ಸುಮ್ಮನಾಗುತ್ತಾನೆ,

ಉದ್ದ ಕಲ್ಪವೃಕ್ಷವೊಂದು, ತಾನು ಸದಾ ಬಸಿರಾಗುವ ಪರಿಗೆ ಬೆರಗಾಗಿ, ಮಿಲನದ ಪರಿಮಳಕ್ಕೆ ಹಾತೊರೆಯುತ್ತಾನೆ, ಸಾವಿನ ಹಕ್ಕಿಗೆ ತಲೆಕೊಡಲು ಕಾದು ಕುಂತಂತೆ, ಒರಟನಾಗಿ ಬೊಬ್ಬೆ ಹೊಡೆಯುತ್ತಾ ಮುಗುಳ್ನಗುತ್ತಾನೆ,

ಒಂದಿನಿತು ಸಾವು ಕೊಡು ಎನಗೆ. ಇಲ್ಲವೇ ಸತ್ತವರ ಉಳಿಸಿ ಕೊಡು ಎಂದು ಸದಾ ಶವದಂತೆ ತಟಸ್ಥವಾಗುತ್ತಾನೆ, ಹೆಣ್ಣಿಗಷ್ಟೇ ಭಾವಗಳು ಉಕ್ಕುವುದಲ್ಲ, ವಿಶಾಲ ಎದೆ, ಗಟ್ಟಿ ತೊಡೆಯ ಗಂಡಿಗೂ, ಗುಂಡಿಗೆ ಸೋರುತ್ತದೆ, ನೋವು ಯಾರಪ್ಪನ ಮನೆ ಸ್ವತ್ತಲ್ಲ, ಕಿರುಚಿ ಸುಸ್ತಾದಾಗ ತುಟಿಗೆ ಬೀಗ ಹಾಕಿ ಮಲಗಿದಂತೆ ಮುಲುಗುತ್ತಾನೆ,

ನೇತ್ರಕ್ಕೆ ಕಾಣುವ ಹಕ್ಕಿದೆ, ಮುಚ್ಚಿದರೆ ಕುರುಡನಾಗಬಹುದು,, ಮನಸಿಗೆ,,,, ಆ ಮನಸಿನ ಭಾವಕ್ಕೆ ಯಾವ ಮುಚ್ಚಿಗೆ ಹಾಕುವುದು? ತಟಕ್ಕನೆ ಬಂದೆರಗುವ ನೆನಪುಗಳಿಗೆ ಚೂರಿ ಹಾಕಿ ಕೊಲ್ಲುವ ಗಂಡಸ್ತನ ಯಾವ ಗಂಡಿಗೂ ಇಲ್ಲ, ಇದು ಅವನ ವಾದ, ವಾದವಲ್ಲ ವಾಸ್ತವ.

ಅನುವಾದ ಮಾಡುವ ಗೋಜಿಗೆ ನಾನು ಹೋಗಲಿಲ್ಲ, ಆದರೆ ಪ್ರತಿ ದಿನ ಅವನು ಕಾಡುತ್ತಾನೆ, “ಅನುವಾದಿಸು ನನ್ನ ಬದುಕನ್ನು ಎಂದು”.

ಅಲ್ಲಾ, “ಬದುಕೇನು ಭಾಷೆಯಲ್ಲಿ ಬರೆದ ಕಾವ್ಯವೇ? ಕಾದಂಬರಿಯೇ? ಕವನವೇ? ವಿಮರ್ಷೆಯೇ? ಸಂಗೀತವೇ? ಬೇಕಾದ ಭಾಷೆಗೆ ಅನುವಾದಿಸಲು?” ಬದುಕೊಂದು ಭಾವಯಾನ ಅಲ್ಲವೇ? ಹುಟ್ಟುವುದೇ ಸಾಯುವುದಕ್ಕಲ್ಲವೇ? ಆದರೆ ಅವನ ವಾದವೇ ಬೇರೆ! ಬಟ್ಟೆಯ ಒಳಗಿನ ದೇಹಕ್ಕೂ ಮನಸಿನ ಒಳಗಿನ ಭಾವಕ್ಕೂ ಸಂಬಂಧವೇ ಇಲ್ಲ, ಅವನ ದೃಷ್ಟಿಯಲ್ಲಿ. ನಿರಂತರ ನಕ್ಷತ್ರಗಳು ಸುಳ್ಳು, ನಿಜ ಬಾಂದವ್ಯ ಸುಳ್ಳು, ತಿನ್ನುವ ಅನ್ನ ಸುಳ್ಳು, ಉಕ್ಕುವ ಚಿಲುಮೆಗಳು ಸುಳ್ಳು, ಸೊಕ್ಕಿನ ಪೋಕರಿತನ ಸುಳ್ಳು, ಹಾಗಿದ್ದರೆ ನಿಜವೇನು? ಅಯ್ಯೋ ನಿಜವೂ ಸುಳ್ಳೇ ಅವನ ಪ್ರಕಾರ. ಬೆಂಕಿಯಲ್ಲಿ ಒಂದು ತಂಪಿದೆ, ಅದು ಅವನಿಗೆ ಬೇಕು, ತಂಪಿನಲ್ಲಿ ಹುದುಗಿದ ಬೆಂಕಿಯೊಂದಿದೆ ಅದರಿಂದ ಅವನು ಪಾರಾಗಬೇಕು, ಬದುಕು ಕೊಡುತ್ತೇನೆ ಎಂದು ಬಂದ ಅದೆಷ್ಟೋ ಹೆಣ್ಣುಗಳಿಗೆ ಅವನ ಆಲೋಚನೆಯ ಹತ್ತಿರವೂ ಸುಳಿಯಲಾಗದೆ ನಿಧಾನವಾಗಿ ದೂರ ಸರಿದಿದ್ದಾರೆ. ಆದರೆ ಅವನು ಇರುವುದೇ ಹಾಗೆ, ಜಗದ ದುರಂತಗಳಿಗೆ ಕೆಲವೊಮ್ಮೆ ಅಳುತ್ತಾ, ಕೆಲವೊಮ್ಮೆ ತಟಸ್ಥವಾಗುತ್ತಾ, ಕೆಲವೊಮ್ಮೆ ಕುಗ್ಗುತ್ತಾ, ಸದಾ ಬದುಕನ್ನು ಯಾವುದಾದರೂ ಚಕ್ರಕ್ಕೆ ಸಿಕ್ಕಿಸುತ್ತಾ, ಮರದ ಬುಡದಲ್ಲಿ, ಕಾಡಿನ ಅಂಚಿನಲ್ಲಿ, ಹಕ್ಕಿಯ ಕಲರವದ, ಹಾವು ಹರಿದು ಹೋಗುವ ಜಾಗದಲ್ಲಿ, ನಿಂತು ಏನನ್ನೋ ದಿಟ್ಟಿಸುತ್ತಾ ಇರುತ್ತಾನೆ. ಮೊಟ್ಟೆ ಇತ್ತ ಕಾಡುಕೋಳಿಯ ತಲ್ಲಣ ಮನದಲ್ಲಿರುತ್ತದೆ. ಒಮ್ಮೊಮ್ಮೆ ವಿಚಿತ್ರ ಹಸನ್ಮುಖಿ, ಕಿಚ್ಚಾಗುತ್ತದೆ ನನಗೆ ಅವನನ್ನು ನೋಡಿ, ಹೇಗೆ ಇಷ್ಟು ಹುಚ್ಚನಂತೆ ಇರಬಲ್ಲ ಆತ. ಇಷ್ಟು ವೈವಿಧ್ಯತೆಯಲ್ಲಿ ಅವನಿಗೇಕೆ ಬದುಕಿನ ಅನುವಾದ ಹುಚ್ಚು ಹಿಡಿಯಿತೋ ಗೊತ್ತಿಲ್ಲ.

ನಾನು ಆಗುವುದಿಲ್ಲ ಎಂದರೆ ಅವನು ಮೌನಿಯಾಗುತ್ತಾನೆ, ವಿಚಿತ್ರ ಮೌನಿಯಾಗುತ್ತಾನೆ, ಅದಕ್ಕಾಗಿಯೇ “ಅನುವಾದಿಸೋಣ” ನಿನ್ನ ಬದುಕನ್ನು ಎಂಬ ಭರವಸೆ ಇತ್ತಿದ್ದೇನೆ, ಹುಚ್ಚು ನಗೆಯೊಂದನ್ನು ನನ್ನೆಡೆಗೆ ಎಸೆದು ಅವನು ಮರೆಯಾಗಿದ್ದಾನೆ, ಅವನು ತಿರುಗಿ ಬರುವಷ್ಟರೊಳಗೆ ಅನುವಾದದ ಹಾದಿ ಕಂಡುಕೊಳ್ಳಬೇಕು ನಾನು.

-ಜಿ ಕೆ ನ

Advertisements
4 ಟಿಪ್ಪಣಿಗಳು
  1. ಬರವಣಿಗೆಯಲ್ಲಿ ಬಹಳ ಉದ್ವೇಗವಿದೆ. ಸೂಪರ್👌💐

    Liked by 1 person

  2. ಇದೇನು ಬರೆದೆಯೋ ಗೆಳೆಯಾ .. ನನ್ನೊಳಗೊಬ್ಬ ಇಂಥಹದೇ ಗೆಳೆಯನೊಬ್ಬನಿದ್ದಾನೆ.. ಬದುಕು ಕೊಟ್ಟದೆಲ್ಲವನ್ನೂ ಸುಳ್ಳು ಅಂದೆನ್ನುತ್ತಾ ಯಾವುದೋ ಸತ್ಯದ ಹುಡುಕಾಟದಲ್ಲಿ ತನ್ನನ್ನೇ ತಾನು ಕಳೆದುಕೊಂಡ ಮುಸಾಫಿರನ ಬದುಕು ಅವನದು, ಥೇಟ್ ನಿನ್ನ ಗೆಳೆಯನಂತೆಯೇ …

    ಧನ್ಯವಾದಗಳು ಓದಿಸಿದ್ದಕ್ಕೆ, ಇನ್ನೊಮ್ಮೆ ಓದಿದರಷ್ಟೇ ಸಮಾಧಾನ 🙂

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: