Skip to content

ಸುಷ್ಮಾ ನೆನಪಿಸಿದ ಕಾಲು ಹಾದಿ

ಮೇ 31, 2017

ಬಸ್ಸಿನಲ್ಲಿ ಕಿಟಕಿಯ ಪಕ್ಕ ಕುಳಿತು ದೂರ ಪ್ರಯಾಣ ಮಾಡುವಾಗ, ಮುಖ್ಯ ರಸ್ತೆಗೆ ಅಂಟಿಕೊಂಡ ಕಾಲು ಹಾದಿಗಳು ಬಹಳ ಕುತೂಹಲ ಹುಟ್ಟಿಸುತ್ತವೆ, ಕಾಲುದಾರಿಗಳು ಕಾಡಿದಷ್ಟು, ಬೇರಾವುದೂ ಕಾಡುವುದಿಲ್ಲ,,,,,, ಅದೆಷ್ಟು ಮನಸುಗಳನ್ನು ಬೆಸೆದಿರಬಹುದು ಈ ಕಾಲುಹಾದಿಗಳು, ಸಣ್ಣ ಪುಡಿಯಂತಹ ಮಣ್ಣು, ಮತ್ತೊಂದಿಷ್ಟು ನವಿಲುಗರಿಯಂತಹ ಹುಲ್ಲು,,,,,, ಅದರ ಮೇಲೆ ನಡೆವಾಗ, ನಮ್ಮನ್ನೇ ನಾವು ಮರೆವಂತಹ ಒಂದಷ್ಟು ನೆನಪುಗಳು, ಹಾಗು ಕಾಲು ಹಾದಿಯ ಪಕ್ಕದ ಮರಗಳ ಸಂದಿಯಿಂದ ಹಾದುಬರುವ ಸೂರ್ಯನ ಕಿರಣಗಳು, ಕಣ್ಣಿಗೆ ಸೋಕಿ ಒಂತರ ಹಿತ,,,,,

ಇದಷ್ಟೇ ಅಲ್ಲದೆ ಕಾಲುಹಾದಿಗೊಂದು ಅಪೂರ್ವ ಪರಿಮಳವಿದೆ, ಅದನ್ನು ಸವಿದವರು ಮಾತ್ರ ಗ್ರಹಿಸಬಲ್ಲರು. ಈ ಕಾಲುಹಾದಿಗಳಲ್ಲಿ ನಡೆದು ಹೋಗುವಾಗ ಮನದ ದುಗುಡುಗಳು ಅಷ್ಟಾಗಿ ಬಾದಿಸುವುದಿಲ್ಲ, ನಾವು ಕಾಲಿಟ್ಟ ಮಣ್ಣು ನೇರವಾಗಿ ನಮ್ಮ ದುಗುಡಗಳನ್ನು ತನ್ನೊಳಗೆ ಎಳೆದುಕೊಳ್ಳೂತ್ತದೆಯೇನೋ!

18739687_1497490226938590_5728024063161364006_n

ಕಾಲು ಹಾದಿಯಲ್ಲಿ ಸಾಗುವಾಗ ಎದುರಿಂದ ಬರುವ ರಾಮಣ್ಣ, ಸೀತಕ್ಕ, ಪುಟಾಣಿ ಹುಡುಗಿ, ಸೈಕಲ್ಲಿನಲ್ಲಿ ಬಾಳೆಗೊನೆ ಇಟ್ಟು ಪೇಟೆಗೆ ಹೊರಟ ಕೆಲವರು, ತಲೆಯ ಮೇಲೆ ಸೌದೆ ತುಂಡು ಹೊತ್ತು ನಡೆವ ಪಕ್ಕದ ಮನೆಯವರು, ನಾಚುತ್ತ ಕಾಲೇಜು ಬ್ಯಾಗು ಸಿಕ್ಕಿಸಿಕೊಂಡು ಜೋರಾಗಿ ನಡೆಯುವ ಹುಡುಗಿ, ಉಡುದಾರಕ್ಕೆ ಚಡ್ಡಿ ಸಿಕ್ಕಿಸಿಕೊಂಡು ಒಂದು ಕೈಯಲ್ಲಿ ಸೈಕಲ್ ಟಯರ್ ಓಡಿಸಿಕೊಂಡು ಓಡುವ ಪುಟ್ಟ ಹುಡುಗ, ಎಲ್ಲರೂ ಎದುರಾಗುತ್ತಾರೆ, ಎದುರಾದವರು ಸುಮ್ಮನೆ ಹೋಗುವುದಿಲ್ಲ, ಕುಶಲೋಪರಿ ಮಾತನಾಡುತ್ತಾರೆ, ಮನೆ ಮಂದಿಯ ಆರೋಗ್ಯ ವಿಚಾರಿಸುತ್ತಾರೆ. ಅದೇ ಈ ಕಾಲು ಹಾದಿಯ ಶಕ್ತಿ, ಇಲ್ಲಿ ಮನುಷ್ಯರ ನಡುವಿನ ಆತ್ಮೀಯತೆಗೆ ಸಮಯ ಇದೆ, ಸಿಹಿಯಾದ ಒಂದು ಸೆಳೆತ ಇದೆ.

ಬೆಳಿಗಿನ ಮಂಪರಿನಲ್ಲಿ, ಫೇಸ್ ಬುಕ್ ಕಣ್ಣಾಡಿಸುವಾಗ ಸುಷ್ಮಾ ಅವರ ಗೋಡೆಯಲ್ಲಿ ಕಂಡ ಈ ಚಿತ್ರ ನನ್ನನು ತಟಕ್ಕನೆ ಬಾಲ್ಯದ ಕಾಲುಹಾದಿಗೆ ಸೆಳೆದುಕೊಂಡು ಹೋಯಿತು.

ಕೇರಳದ ದಿನಗಳ ಬಗ್ಗೆ ಬರೆಯುವಾಗ, ಕೇರಳದ ಕಾಲು ಹಾದಿಯ ಬಗ್ಗೆ ಬರೆದಿದ್ದೆ, ಅದರ ನೆನಪುಗಳು ಒಂದಷ್ಟು ಕಾಡಿದವು.

ಸರಿಯಾಗಿ ಅವಲೋಕಿಸಿದರೆ, ಡಾಂಬಾರು ರಸ್ತೆಗಳಿಗಿಂತ ನಮ್ಮನ್ನು ಹೆಚ್ಚಾಗಿ ಕಾಡುವುದು ಈ ಕಾಲುಹಾದಿಗಳೇ, ಕೆಲವೊಮ್ಮೆ ಕಾಲುಹಾದಿಯ ಪಕ್ಕ ಹಾದುಹೋಗುವ, ಚಿಕ್ಕ ನೀರಿನ ಝರಿ, ನಮ್ಮನ್ನು ಇನ್ನಷ್ಟು ಆಳಕ್ಕೆ ಎಳೆದುಕೊಳ್ಳುತ್ತದೆ, ಬಾಲ್ಯ ಛಟಾರನೆ ಕೆನ್ನೆಗೆ ಹೊಡೆದು, ನೀನ್ಯಾಕೆ ದೊಡ್ಡದಾಗಿ ಬೆಳೆದೆ ಎಂದು ಪ್ರಶ್ನಿಸುತ್ತದೆ, ಕಾಲು ಹಾದಿಯ ಪಕ್ಕದ ನೇರಳೆ ಮರ, ನನ್ನನು ನೋಡು ಎಂದು ಕರೆದಂತೆ ಅನಿಸುತ್ತದೆ. ಎಳನೀರು ಕಿತ್ತು ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಹೋಗುವ ಸಿದ್ದಣ್ಣ, ಕರೆದಂತೆ ಭಾಸವಾಗುತ್ತದೆ,

ನಮಗೆ ಗೊತ್ತಿಲ್ಲದೇ ಈ ಕಾಲುದಾರಿಗಳು ನಮ್ಮನ್ನೆಷ್ಟು ಸೆಳೆದಿವೆ,

ಭಾವ ಬಸಿಯುವ ಕಾಲು ಹಾದಿಗಳೇ
ಸೇರಿಸಿ ನಮ್ಮನು,
ಅದೇ ಬಾಲ್ಯದ ಗೂಡಿಗೆ
ಹೆಂಚಿನ ಸಂದಿಯಲ್ಲಿ ಸಣ್ಣ ಕಿರಣಗಳು
ಸರಿದು ಹೋಗುವ
ಆ ನನ್ನ ಹಳೆಯ ಮನೆಗೆ

ಡಾಂಬಾರುಗಳ ಸುರಿದುಕೊಂಡು
ಸೆರೆಯಾಗಬೇಡಿ
ಆಧುನಿಕ ನಾಟಕಗಳಿಗೆ…

ಹಾಗೆಯೇ ಇರಿ ನೀವು,,,,
ಅವ್ವನ ಹಳೆ ನೂಲಿನ ಸೀರೆಯ ಹಾಗೆ
ನಿಮ್ಮೊಡಲಲ್ಲಿ ಕಾಲಿಟ್ಟ ಕ್ಷಣ,
ಅವ್ವ ಕೈತುತ್ತು ಕೊಟ್ಟು ಆಲಂಗಿಸಿದಂತಿರಬೇಕು

ಮತ್ತೆ ಬರುವೆ ನಾನು
ನನ್ನ ಲೆದರು ಶೂಗಳನ್ನು ಕಿತ್ತೆಸೆದು
ನಿಮ್ಮನು ಸೋಕಲೆಂದು,,,

ಆಲಂಗಿಸಿ ನನ್ನನು

-ಜಿ.ಕೆ ನವೀನ್

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: